ಪಡುಕೋಣೆ, ಪ್ರಕಾಶ
	1955 ಪ್ರಸಿದ್ಧ ಷಟ್ಲ್ ಬ್ಯಾಡ್ಮಿಂಟನ್ ಆಟಗಾರ. ಸ್ಥಳ ಬೆಂಗಳೂರು. ಹದಿನಾರು ವರ್ಷ ಪ್ರಾಯದಲ್ಲಿಯೆ ಬ್ಯಾಡ್ಮಿಂಟನ್‍ನಲ್ಲಿ ರಾಷ್ಟ್ರೀಯ ಜ್ಯೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಷಿಪ್ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದವರು. ಜೂನ್ 10, 1955ರಂದು ಜನಿಸಿದರು. ತಂದೆ ರಮೇಶ್ ಉತ್ತಮ ಬ್ಯಾಡ್ಮಿಂಟನ್ ಆಟಗಾರರಾದರೆ, ತಾತ ನುರಿತ ಟೆನಿಸ್ ಆಟಗಾರರು. ಹಿರಿಯ ಸಹೋದರ ಪ್ರದೀಪ, ಕಿರಿಯರಾದ ಮಹೇಶ, ಹರೀಶ ಎಲ್ಲರೂ ಹೆಸರಾದ ಬ್ಯಾಡ್ಮಿಂಟನ್ ಆಟಗಾರರೇ. ಮಹೇಶ ಬೆಂಗಳೂರು ವಾರ್ಸಿಟಿ ಆಟಗಾರ. ಹರೀಶ ರಾಜ್ಯದ ಪ್ರಸಿದ್ಧ ಆಟಗಾರ.

	ಪ್ರಕಾಶ ಅವರು ಬೆಂಗಳೂರಿನ ಶೇಷಾದ್ರಿಪುರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದು ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದು ಬೆಂಗಳೂರಿನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿದ್ದಾರೆ.

	1978ರ ಆಗಸ್ಟ್ ಹನ್ನೊಂದನೆಯ ದಿನಾಂಕ ಭಾರತ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸುವರ್ಣದಿನ. ಅಂದು ಕೆನಡದ ಎಡ್ಮಂಟನ್ನಿನಲ್ಲಿ ನಡೆದ ಹನ್ನೊಂದನೆಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 23 ವರ್ಷ ಹರೆಯದ ಆರು ಅಡಿ ಎತ್ತರದ ಸುಂದರ ತರುಣ ಪ್ರಕಾಶ ಷಟ್ಲ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಫೈನಲ್ಸ್‍ನಲ್ಲಿ ಇಂಗ್ಲೆಂಡಿನ ಡೆರಿಕ್ ಟಾಲ್ಬಟ್ ಅವರನ್ನು 15-9, 15-8ರಲ್ಲಿ ಎರಡು ನೇರ ಆಟಗಳಿಂದ ಸೋಲಿಸಿ, ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‍ನಲ್ಲಿ ಪ್ರಪ್ರಥಮ ಬಾರಿಗೆ ಸ್ವರ್ಣ ಪದಕ ಗಿಟ್ಟಿಸಿ ಭಾರತಕ್ಕೆ, ಕರ್ನಾಟಕಕ್ಕೆ ಕೀರ್ತಿ ತಂದು ಕೊಟ್ಟರು.

	ಬ್ಯಾಡ್ಮಿಂಟನ್ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. 1976ರಲ್ಲಿ ದೆಹಯಲಿಯಲ್ಲಿ ಮುಕ್ತಾಯಗೊಂಡ ನೆಹರೂ ಸ್ಮಾರಕ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಇವರು ಇಂಡೋನೇಷ್ಯದ ನಂ.1 ಆಟಗಾರರಾದ ಸುಮಿತಾರನ್ನು ಸೋಲಿಸಿ ಫೈನಲ್ಸ್‍ವರೆಗೆ ತಲುಪಿದ್ದರು. ಆಗ ಇಂಡೋನೇಷ್ಯ ಮ್ಯಾನೇಜರ್ ಸುವಾರ್ಸಾನೋ ಅವರು ಪ್ರಕಾಶ ವಿಶ್ವದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎಂದು ಹೇಳಿದ್ದು ಅತ್ಯುಕ್ತಿಯಲ್ಲ.

	ಇತರ ಆಟಗಾರರಂತೆ ಪ್ರಕಾಶ ಕೋರ್ಟಿನಲ್ಲಿ ವೇಗವಾಗಿ ಚಲಿಸದೆ, ನಿಧಾನವಾಗಿ ಚಲಿಸುತ್ತ ಸದಾ ಷಟ್ಲ್ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ. ಷಡ್ಲನ್ನು ಕೋರ್ಟಿನಲ್ಲಿ ತ್ವರಿತವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಕಳುಹಿಸಿ ಎದುರಾಳಿಯನ್ನು ಗೊಂದಲಕ್ಕೀಡುಮಾಡುವುದು ಪ್ರಕಾಶರ ಆಟದ ವೈಶಿಷ್ಟ್ಯ. ಇವರ ಆಟದಲ್ಲಿ ಸಮರ್ಪಣ ಭಾವ, ಆಟದಿಂದ ಆಟಕ್ಕೆ ಕ್ರೀಡಾತಂತ್ರಗಳನ್ನು ಉತ್ತಮಗೊಳಿಸಿಕೊಳ್ಳುವ ಗುಣಗಳು ಕಾಣುತ್ತವೆ. ಇಂಡೋನೇಷ್ಯದಲ್ಲಿ ನಡೆದ ತರಬೇತಿ, ಎಡ್ಮಂಟನ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸುವರ್ಣಪದಕ ಪಡೆಯಲು ಪ್ರಕಾಶಕರಿಗೆ ತುಂಬ ನೆರವಾಯಿತು. ವಿದೇಶಗಳಲ್ಲಿ ತರಬೇತಿ ಪಡೆಯುವಾಗ ಪ್ರಕಾಶ ಷಾರ್ಟ್ ರ್ಯಾಲಿಸ್ ಹಾಗೂ ಲೀಪ್ ಮತ್ತು ಸ್ಮ್ಯಾಷ್ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರು. ನೆಟ್ ಪ್ಲೇ ಅಲ್ಲದೆ ಹಾಫ್ ಸ್ಮಾಷ್ ಮತ್ತು ಡ್ರಾಪ್‍ಷಾಟ್‍ಗಳಿಗೆ ಪ್ರಕಾಶ ಪ್ರಸಿದ್ಧರು. ಇವರಿಗೆ 1972ರಲ್ಲಿ ಅರ್ಜುನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. 1991ರಲ್ಲಿ ಕ್ರೀಡೆಯಿಂದ ನಿವೃತ್ತಿ ಹೊಂದಿದರು. 1993 ಮತ್ತು 1996ರಲ್ಲಿ ತರಬೇತುದಾರರಾಗಿ ಆಯ್ಕೆಯಾದರು. ಪ್ರಸ್ತುತ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

	ಪ್ರಕಾಶ ಅವರು ಕ್ರಿಕೆಟ್, ಬ್ಯಾಸ್ಕೆಟ್‍ಬಾಲ್ ಮತ್ತು ಟೇಬಲ್ ಟೆನಿಸ್ ಕೂಡ ಆಡುತ್ತಾರೆ.			(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ